ಓಂ: ಒಂದು ಬೀಜಾಕ್ಷರ. ಓಂಕಾರವೆಂದೂ ಪ್ರಣವವೆಂದೂ ಇದನ್ನು ವ್ಯವಹರಿಸುವುದುಂಟು. ವೇದಾದಿ ಪವಿತ್ರ ಗ್ರಂಥಗಳ ಪಠನದ ಪ್ರಾರಂಭದಲ್ಲಿ ಇದನ್ನು ಉಚ್ಚರಿಸಬೇಕೆಂಬ ನಿಯಮವಿದೆ. ಮೊದಲು ಉಪನಿಷತ್ತುಗಳಲ್ಲಿ ಬೀಜಾಕ್ಷರವಾಗಿ ಕಂಡುಬರುವ ಇದರ ಅ, ಉ, ಮ ಎಂಬ ಧ್ವನಿಗಳೂ, ಒಟ್ಟಾಗಿ ಈ ಅಕ್ಷರವೂ ಆಧ್ಯಾತ್ಮಿಕ ಪ್ರಭಾವವುಳ್ಳವೆಂದೂ ಇದು ಪರಬ್ರಹ್ಮಸ್ವರೂಪವೆಂದೂ ಅಲ್ಲಿ ಪ್ರತಿಪಾದಿತವಾಗಿದೆ. ಮಾಂಡೊಕ್ಯೋಪನಿಷತ್ತಿನ ಓಮಿತ್ಯೇಕಾಕ್ಷರಮಿದಂ ಸರ್ವಂ ತಸ್ಯೋಪವ್ಯಾಖ್ಯಾನಂ ಭೂತಂ ಭವದ್ ಭವಿಷ್ಯದಿತಿ ಸರ್ವವೋಂಕಾರ ಏವ | ಯಚ್ಚಾನ್ಯತ್ತ್ರಿಕಾಲಾತೀತಂ ತದಪ್ಯೋಂಕಾರ ಏವ || (ಎಲ್ಲವೂ ಓಂ ಎಂಬ ಅಕ್ಷರವೇಯೆ : ಭೂತ ವರ್ತಮಾನ ಭವಿಷ್ಯತ್ತುಗಳು ಅದರ ವಿಸ್ಪಷ್ಟ ಪ್ರಕಥನಗಳು; ತ್ರಿಕಾಲಾತೀತವಾದುದೂ ಓಂಕಾರವೇಯೆ) ಎಂಬ ವಾಕ್ಯಗಳು ಅಂಥ ಪ್ರತಿಪಾದನೆಗೆ ನಿದರ್ಶನಗಳಾಗಿವೆ. ಬರಬರುತ್ತ ಇದರ ಅ, ಉ, ಮ ಇವು ಕ್ರಮವಾಗಿ ವಿಷ್ಣು, ಶಿವ, ಬ್ರಹ್ಮ ಇವರನ್ನು ಪ್ರತಿನಿಧಿಸುವಂತಾಗಿ ಇದು ಹಿಂದೂಮತದಲ್ಲಿ ತ್ರಿಮೂರ್ತಿಗಳ ಐಕ್ಯದ ಕಲ್ಪನೆಯನ್ನೂ ಸೂಚಿಸುತ್ತದೆ. ಹಾಗೆಯೇ ಇದನ್ನು ಮೂರು ವೇದಗಳಿಗೂ ಅನ್ವಯಿಸಿದ್ದಾರೆ. ಇದರ ಮತ್ತೊಂದು ಹೆಸರಾದ ಪ್ರಣವವೆಂಬುದುನು (ಸ್ತುತಿಸು, ಶಬ್ದಮಾಡು) ಎಂಬ ಧಾತುವಿನಿಂದ ನಿಷ್ಟನ್ನವಾಗಿ, ಇದರಿಂದ ಆತ್ಮವೋ ಇಷ್ಟದೇವತೆಯೋ ಸ್ತುತಿಸಲ್ಪಡುವುದರಿಂದ ಪ್ರಣವವಾಗಿದೆಯೆಂದು ಅದಕ್ಕೆ ವಿವರಣೆ ಕಂಡುಬರುತ್ತದೆ. ಅಲ್ಲದೆ ನಮಸ್ಕರಿಸು ಎಂಬ ಅರ್ಥವುಳ್ಳ ನಮ್ ಧಾತುವಿನಿಂದ ಬಂದು, ತ್ರಿಮೂರ್ತಿಗಳ ವಿಚಾರದಲ್ಲಿ ನಮಸ್ಕಾರಾತ್ಮಕವಾಗಿರುವ ಇದು ಪ್ರಣವವಾಗಿದೆಯೆಂಬ ಮತ್ತೊಂದು ವಿವರಣೆಯನ್ನೂ ಗಮನಿಸಬಹುದು. (ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ